Friday, January 8, 2010

ಇವರ ನಿಮ್ಮವರೆಂದು ಕಾಣಿರಿ

ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಸುನೀತಾ ಕೃಷ್ಣನ್ ಅನ್ನುವ ಸಾಮಾಜಿಕ ಕಾರ್ಯಕರ್ತೆ ನೀಡಿದ ಭಾಷಣದ ವಿಡಿಯೋ ಕಣ್ಣಿಗೆ ಬಿತ್ತು. ಈ ವಿಡಿಯೋ ವಿಚಾರ ಪ್ರಚೋದಕ ಮತ್ತು ಮನಕಲಕುವ ಹಾಗಿದ್ದುದರಿಂದ ಸಹ-ಬ್ಲಾಗಿಗರ ಗಮನಕ್ಕೆ ತರಬಹುದೆಂದೆನಿಸಿತು. ೧೩ ನಿಮಿಷಗಳನ್ನ ವಿಡಿಯೋ ವೀಕ್ಷಣೆಗೆ ಮೀಸಲಿಟ್ಟರೆ ಸಾಕು.  ಈ ವಿಡಿಯೋದ  URL ಲಿಂಕನ್ನು ಲೇಖನದ ಕೊನೆಯಲ್ಲಿ ಅಂಟಿಸಿದ್ದೇನೆ.

 ಈ ಸುನೀತಾ ಕೃಷ್ಣನ್, ಲೈಂಗಿಕ  ಹಿಂಸೆಗೆ ಒಳಗಾದವರ ರಕ್ಷಣೆಗೆ ಹಾಗು ಅಂಥವರ ಪುನರ್ವಸತಿಗೆ ಶ್ರಮಿಸುತ್ತಿದ್ದಾರೆ. ತಮ್ಮ ಮಾತುಗಳನ್ನು ಕೆಳಗಿನ ಉದಾಹರಣೆಗಳೊಂದಿಗೆ ಪ್ರಾರಂಭಿಸುತ್ತಾರೆ.
  1. ನಾಲ್ಕು ವರ್ಷದ ಪ್ರಣೀತಳ ತಾಯಿ ಲೈಂಗಿಕ ಕಾರ್ಯಕರ್ತೆ, HIV ಪೀಡಿತೆ. ತನಗೆ ತುಂಬಾ ಅನಾರೋಗ್ಯವಾದಾಗ ಪ್ರಣೀತಳನ್ನು ಒಬ್ಬ ಬ್ರೋಕರ್'ಗೆ ಮಾರುತ್ತಾಳೆ. ಸುನೀತಾ ಕೃಷ್ಣನ್ ತಂಡಕ್ಕೆ ಈ ವಿಷಯ ಗೊತ್ತಾಗಿ, ಅಲ್ಲಿಗೆ ತಲುಪುವದರೊಳಗೆ ಈ ಮಗುವಿನ ಮೇಲೆ ಅದಾಗಲೇ ಮೂರು ಜನರ ಗುಂಪಿನಿಂದ ಅತ್ಯಾಚಾರ ನಡೆದುಹೋಗಿರುತ್ತದೆ.
  2. ಮೂರು ವರ್ಷದ ಶಾಹೀನ್ ರೈಲು ಹಳಿಗಳ ಬದಿಯಲ್ಲಿ ಸಿಕ್ಕಾಗ ಸಾಯುವ ಸ್ಥಿತಿಯಲ್ಲಿರುತ್ತಾಳೆ. ಈ ಮಗು ಕೂಡ ಅತ್ಯಾಚಾರಕ್ಕೊಳಗಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಗುವಿನ ಸಣ್ಣ ಕರಳು ಹೊರಗೆ ಬಂದಿರುತ್ತದೆ, ಸಣ್ಣ ಕರುಳನ್ನು ಸ್ವಸ್ಥಾನಕ್ಕೆ ಸೇರಿಸಲು  32 ಹೊಲಿಗೆಗಳು ಬೀಳುತ್ತವೆ - ಮಗು ಸದ್ಯಕ್ಕೆ ಉಳಿದುಕೊಳ್ಳುತ್ತದೆ.
  3. ಐದು ವರ್ಷದ ಅಂಜಲಿಯ ತಂದೆ ಕುಡುಕ. ಮಗಳನ್ನು ಸೂಳೆಗಾರಿಕೆಗೆ ಮಾರಿಬಿಡುತ್ತಾನೆ. ಈ ಮಗುವನ್ನೂ ಸುನೀತಾ ಕೃಷ್ಣನ್ ತಂಡ ರಕ್ಷಿಸುತ್ತದೆ. 
ಸ್ವಯಂ ಸುನೀತಾ ಕೃಷ್ಣನ್, 15 ವರ್ಷದವರಾಗಿದ್ದಾಗ ಎಂಟು ಜನರ ಗುಂಪಿನಿಂದ ಲೈಂಗಿಕ ಹಿಂಸೆಗೊಳಗಾಗಿರುತ್ತಾರೆ. ಸಮಾಜದ ಅನಾದರವೇ,  ಆ ಸಂದರ್ಭದ ದೈಹಿಕ ಹಿಂಸೆಗಿಂತ ಹೆಚ್ಚಿನ ನೋವನ್ನು ನೀಡಿತು ಅವರಿಗೆ.

ಲೈಂಗಿಕ ಹಿಂಸೆಗೊಳಗಾದವರ ಪುನರ್ವಸತಿಗೆ  ನಡೆಸುತ್ತ ಬಂದ  ಈ ಹೋರಾಟದಲ್ಲಿ ೧೪ ಸಲ ಮಧ್ಯವರ್ತಿಗಳಿಂದ ಹಲ್ಲೆಗೊಳಗಾಗಿದ್ದಾರೆ.   ಇದರ ಪರಿಣಾಮವಾಗಿ ಎಡಗಿವಿಯ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ.  ನೋವುಂಡವರನ್ನು  ಮುಖ್ಯವಾಹಿನಿಗೆ ತರುವ ಹೋರಾಟ ಈಗಲೂ ಮುಂದುವರೆದಿದೆ. ಇವರನ್ನು ತಮ್ಮವರೆಂದು ಸ್ವೀಕರಿಸಲು ಸಮಾಜವೇ ದೊಡ್ಡ ತಡೆಗೋಲಾಗಿದೆ, ಸವಾಲಾಗಿದೆ  ಎನ್ನುತ್ತಾರೆ. ಶೋಷಿತರ ಬಗ್ಗೆ ಮಾರುದ್ದ ಭಾಷಣ ಕೇಳಲು, ಸಿನೆಮಾ ನೋಡಲು ತುಂಬಾ ಚೆನ್ನಾಗಿರುತ್ತದೆ, ಆದರೆ ಶೋಷಿತರನ್ನು ಮನೆಗೆ ಕರೆಯುವದು,  ಅವರಿಗೆ ಉದ್ಯೋಗ ನೀಡುವದು, ಅವರ ಮಕ್ಕಳ ಜೊತೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾತ್ರ ಚೆನ್ನಾಗಿರುವುದಿಲ್ಲ, - ನಮ್ಮ ವಿಶಾಲ ಮನೋಭಾವ ಅಲ್ಲಿಗೇ ಮುಕ್ತಾಯಗೊಳ್ಳುತ್ತದೆ, ಎಂದು ನೋವು ತುಂಬಿ ಹೇಳುತ್ತಾರೆ. ನೋವುಂಡವರನ್ನು ಮನುಷ್ಯರಂತೆ ನೋಡಿಕೊಳ್ಳಿ, ಇನ್ನಾದರೂ ಮೌನದ ಸಂಸ್ಕೃತಿ ಮುರಿದು ಈ ಕಥೆಯನ್ನು ಕನಿಷ್ಠ ಇಬ್ಬರಿಗೆ ಹೇಳಿ ಅವರ ಮನ ಪರಿವರ್ತನೆ ಮಾಡಿ, ಮತ್ತೆ ಅವರು ಇನ್ನಿಬ್ಬರಿಗೆ ಈ ಕಥೆ ಹೇಳುವಂತೆ ಮಾಡಿ, ನಿಮ್ಮ ಸೀಮಿತ ಜಗತ್ತಿನಲ್ಲಾದರೂ ಸರಿ, ಸಮಾಜ ಪರಿವರ್ತನೆ ಮಾಡಲು ಸಹಕರಿಸಿ ಎಂದು ಬಿನ್ನವಿಸುತ್ತ ಮಾತು ಮುಗಿಸುತ್ತಾರೆ.

ಕೃಪೆ:
 http://www.ted.com/
TED - Ideas worth spreading. Technology, Entertainment, Design - That is what TED stands for.



8 comments:

ಚುಕ್ಕಿಚಿತ್ತಾರ said...

ಕರುಣಾಜನಕವಾಗಿದೆ....
ಸಮಾಜ ಜವಾಬ್ದಾರಿಯನ್ನು ಅರಿತುಕೊಳ್ಳಲೇ ಬೇಕಿದೆ....

sunaath said...

ಮನಸ್ಸನ್ನು ಹಿಂಡುವ ಕತೆ ಇದು.

ಶಿವರಾಮ ಭಟ್ said...

ವಿಕೃತ ಮನಸ್ಸಿನ ಮೃಗೀಯ ಪ್ರವೃತ್ತಿಯ ಜನರಿಂದ ತುಂಬಿರುವ ಈ ಜಗತ್ತು ಒಂದು ಗೊಂಡಾರಣ್ಯ....
ಭಗವಂತನ ಸೃಷ್ಟಿಯಲ್ಲಿ ಮನುಷ್ಯನ ಯೋಚನೆಗೂ ಮೀರಿದ ವಿಚಿತ್ರಗಳಿವೆ.
ಮಕ್ಕಳ ಮೇಲಿನ ಲೈಂಗಿಕ ಅತ್ಯಾಚಾರ, ಘೋರ ಪೈಶಾಚಿಕ ದಾಳಿಯಂತಹವು ಮನುಷ್ಯ ಪ್ರಯತ್ನದಿಂದ ಪರಿಹಾರವಾಗುವನ್ತಹುದಲ್ಲ ...
ತೀರ ಕೆಳಸ್ತರದ ಜನರಲ್ಲಿ ಲೈಂಗಿಕ, ವೈದ್ಯಕೀಯ ಅಜ್ಞಾನ ಮತ್ತು ಬಡತನ ಇಂತಹ ಘೋರ ಸನ್ನಿವೇಶಗಳಿಗೆ ಎಡೆ ಮಾಡಿಕೊಡುತ್ತಿದೆ.
ಸಮಸ್ಯೆ ಜಟಿಳವಾಗುತ್ತಿರುವುದಕ್ಕೆ ಬಡಜನರ ಉತ್ಪಾದನೆ ಹೆಚ್ಚುತ್ತಿರುವುದು ಕಾರಣ ... ಮಧ್ಯಮವರ್ಗದಲ್ಲಿ ಇಂದು ಜನಸಂಖ್ಯೆ ಇಳಿಮುಖವಾಗುತ್ತಿದೆ
ಬಲಾತ್ಕಾರದ ಕುಟುಂಬ ಯೋಜನೆ ಮಾಡಿಸಬೇಕು...[ಶ್ವಾನ ನಿಯಂತ್ರಣ ಬೆಂಗಳೂರಿನಲ್ಲಿ ಪರಿಣಾಮಕಾರಿ ಆಗಿತ್ತು ]
ಸಮಸ್ಯೆಯ ಬೇರಿಗೆ ಕೊಡಲಿ ಏಟು ಬೀಳದೆ ಕೇವಲ ಸಾಂತ್ವನದಿಂದ, ದಾನದಿಂದ ಶಾಶ್ವತ ಪರಿಹಾರ ಸಿಗದು.
ಲಾರಿ ಚಾಲಕರಿಂದ ಎಡ್ಸ್ ನ ಪಾಲಿನೆಶನ್ ನಡೆಯುತ್ತಿದೆ..
ಸರಕಾರ ಬಿಕ್ಷಾಟನೆಯನ್ನು ನಿರ್ಭಂದಿಸಲಿ... ಸೆಕ್ಸ್ ವಾಣಿಜ್ಯೀಕರಣಗೊಳಿಸಿ ತೆರಿಗೆ ವಿಧಿಸಲಿ...
ಲೈಂಗಿಕ ವೃತ್ತಿಯನ್ನು ಬಯಸಿ ಹೋಗಿ ದೌರ್ಜನ್ಯಕ್ಕೆ ಒಳಗಾದವರ ಕುರಿತು ಅಷ್ಟೇನು ಸಮಾಜ ತಲೆಕೆಡಿಸಿಕೊಳಲಿಕ್ಕಿಲ್ಲ
ಅದು ಆ ವೃತ್ತಿಯ ಸವಾಲೇ ಹೊರತು ನಾಗರಿಕ ಸಮಾಜದಿಂದ ತಾವಾಗೆ ದೂರವಾದ ಅಂತಹವರನ್ನು ನಾವು ನಮ್ಮವರೆಂದು ಬಗೆಯಬೇಕೆನು ?

ಶಿವರಾಮ ಭಟ್

Subrahmanya said...

ಸಾಮಾಜಿಕ ಕಳಕಳಿಯುಳ್ಳ ಉತ್ತಮ ವಿಚಾರವನ್ನು ಹೆಕ್ಕಿದ್ದೀರಿ...ಬದಲಾವಣೆ ಎಲ್ಲಿಂದ ಪ್ರಾರಂಭವಾಗಬೇಕು ಎಂಬುದೇ ವ್ಯವಸ್ಥೆಯ ದುರವಸ್ಥೆ.

Narayan Bhat said...

ಚುಕ್ಕಿ ಚಿತ್ತಾರದ ವಿಜಯಶ್ರೀ ಅವರೆ,
ಪ್ರಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನೀವಂದದ್ದು ನಿಜ- ಸಾಮಾಜಿಕ ಕಳಕಳಿಯ ಮನಸ್ಸು ಸಮಾಜದಲ್ಲಿ ಸಾವಕಾಶವಾಗಿಯಾದರೂ ಬರಲಿ, ಅಲ್ಲವೇ?

Narayan Bhat said...

ಸುನಾಥ್ ಅವರೆ,
ನೊಂದವರ ನೋವಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.

Narayan Bhat said...

ಆತ್ಮೀಯ ಶಿವಣ್ಣ,
ಜಗತ್ತು ವಿಕೃತ ಮನಸಿನ ಜನರಿಂದ ತುಂಬಿದ ಗೊಂಡಾರಣ್ಯವೆಂದು ಅಂದುಕೊಂಡರೂ, ಕಾಲಾನುಕ್ರಮೇಣ ಅವರಲ್ಲೂ ಮನ ಪರಿವರ್ತನೆಯಾಗಲಿ ಮತ್ತೆ ಸಮಸ್ಯೆಯು ಬೇರುಸಹಿತ ನಿರ್ನಾಮವಾಗುವಂತೆ ಕಾನೂನು, ರಕ್ಷಣೆ ಇಂಥ ಪೂರಕ ವಾತಾವರಣ ನಿರ್ಮಾಣವಾಗಲಿ, ಎಂದು ಆಶಿಸೋಣವೇ? ಬರಹಕ್ಕೆ ಸವಿವರವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆ.

Narayan Bhat said...

ಸುಬ್ರಹ್ಮಣ್ಯ ಭಟ್ ಅವರೆ,
ಇಂಥ ವಿಚಾರಗಳು ಸಮಾಜದ ಅಂಗವಾದ ಒಬ್ಬೊಬ್ಬರ ಮನದ ಕದ ತಟ್ಟಿದರೂ ಸಾಕು, ಬದಲಾವಣೆ ತಾನಾಗಿಯೇ ಬರುತ್ತದೆಯೇನೋ, ಅಲ್ಲವೇ?
ಸದ್ಯಕ್ಕೆ ಇಷ್ಟನ್ನು ಆಶಿಸುವುದೇ ಯೋಗ್ಯವೇನೋ. ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.