Tuesday, January 19, 2010

ಒಂದು ದಿನ ಸಂಜೆ





ಯಾಕೆ ಈ ಸಂಜೆಯ ಆಕಾಶ
ಒಬ್ಬರ ರಟ್ಟೆಯ ಸೊಕ್ಕಿಗೆ,
ಇನ್ನೊಬ್ಬರ ಬಧ್ಧ ವೈರಕ್ಕೆ,
ಮತ್ತೊಬ್ಬರ ಸ್ವಾರ್ಥಕ್ಕೆ, ದುರಾಸೆಗೆ,
ಮತ್ಯಾರದೋ ಧನ ದಾಹಕ್ಕೆ, ಭೂ ದಾಹಕ್ಕೆ,
ಧರ್ಮ ಸಂಸ್ಥಾಪನೆಯಾಸೆಗೆ, ಚಕ್ರಾಧಿಪತ್ಯದಾಸೆಗೆ,
ಕಾರಣವಲ್ಲದ ಕಾರಣಕ್ಕೆ,
ಬದುಕ ಗೆಲ್ಲಲು ಸೋತು,
ಅದಿಲ್ಲದಿರೆ, ಸಾವ ಗೆಲ್ಲಲು ಹೋರಾಡಿ,
ಆಹುತಿಯಾದ ಅಮಾಯಕರ,
ಎದೆಯಿಂದ ಹರಿದ ನೆತ್ತರಿನ ಓಕುಳಿಯಲಿ
ಆಗಸದ ನೀಲ ಅಂಗವಸ್ತ್ರವನು
ಅದ್ದದ್ದಿ ಹರಡಿದ ಹಾಗೆ,
ಎಲ್ಲವೂ ಬೆಂಕಿಯಲಿ ಹೊತ್ತಿ ಉರಿದು,
ಉಳಿದ ಬೂದಿಯಲಿ ಮುಚ್ಚಿದ ಕೆಂಡದ
ಮಂದ ಬೆಳಕಿನ ಹಾಗೆ,
ವಿಷಣ್ಣ ಭಾವವ ಸುರಿವ 
ನೀರವ ಸ್ಮಶಾನ ಮೌನದ ಹಾಗೆ,
ಕಾಣಿಸುವುದೋ ನನಗೆ.



ಟಿಪ್ಪಣಿ:
ಮೇಲಿನ ದೃಶ್ಯವನ್ನು ಸೆರೆಹಿಡಿದದ್ದು ಅಮೇರಿಕದ, ಟೆಕ್ಸಸ್ ರಾಜ್ಯದ "ಸ್ಯಾನ್ ಎಂಟೋನಿಯೋ"ದಲ್ಲಿ. ಟೆಕ್ಸಸ್ ಬಂಧವಿಮುಕ್ತಗೊಳ್ಳುವದರಲ್ಲಿ ಸ್ಯಾನ್ ಎಂಟೋನಿಯೋ ರಕ್ತಕ್ರಾಂತಿ ಮಹತ್ವದ ಪಾತ್ರವಹಿಸಿದೆ. ಇಲ್ಲಿರುವ ಚಿತ್ರ ಅಲ್ಲಿಯ ಯಾವುದೋ ಒಂದು ಕಟ್ಟಡದ ಕೊನೆಯಂತಸ್ತಿನ ಭಾಗವಾಗಿದ್ದು, ದ್ವಜ ಅರ್ಧಕ್ಕೆ ಹಾರಾಡುತ್ತಿರುವ ಕಾರಣ ಮಾತ್ರ, ನನಗೆ ಪ್ರಶ್ನೆಯಾಗಿಯೇ ಉಳಿದಿದ್ದರೂ, ಬರಹಕ್ಕೊಂದು ಭಾವ ನೀಡಿದೆಯೆಂದೆನಿಸುತ್ತಿದೆ.  

Friday, January 15, 2010

ದುರಂತ

ನಾವೆಲ್ಲರೂ ಕಂಡ ಹಾಗೆ
ರೊಟ್ಟಿ ಮಾಡುವದರಲಿ ಒಂದೇ ಬಗೆ.
ನೀರು ಹನಿಸಿ ಹಿಟ್ಟಿಗೆ,
ಕಲೆಸಿ ನಾದುವರು ಮೆತ್ತಗೆ.
ಕಣ ಕಣಗಳೂ ಬೆರೆವ ಹಾಗೆ,
ಬಿಡಿಸಲಾರದ ನಂಟಿನ ಬೆಸುಗೆ.
ಕಟ್ಟಿದ ಉಂಡೆಯನು ಮೆಲ್ಲಗೆ,
ತಟ್ಟಲಿ ಅಂಗೈಗಳ ನಡುವೆ,
ಲಟ್ಟಿಸಲಿ  ಮಣೆಗಳ ಮೇಲೆ,
ಒಡ್ಡಲಿ ಅಗ್ನಿಪರೀಕ್ಷೆಗೆ,
ರೊಟ್ಟಿ ಮಾತ್ರ ಗುಂಡಗೆ.

ಆದರೆ,
ರೊಟ್ಟಿ ಬಿದ್ದರೆ ಕಂಗಳಿಗೆ
ಬಗೆ ಬಗೆಯಲಿ ಬಗೆವಾಸೆ ಎಲ್ಲರಿಗೆ.
ಹಿತವಾಗಿ ಬಳುಕುವಾಗ,
ಒಣಗಿ ರಟ್ಟಿನಂತಿರುವಾಗ,
ಮುರಿಮುರಿದು ನಾಲ್ಕಾರುಬಾರಿ,
ಪದರು ಪದರಾಗಿ ಹೇಗೆ ಬೇಕೋ ಹಾಗೆ,
ಕೆಂಪು ಮೆಣಸಿನ ಪುಡಿ,
ತರಹೇವಾರಿ ಮಸಾಲೆ ಪಲ್ಲೆ,
ಇಂಥ ವ್ಯಂಜನಗಳ ಜೊತೆಗೆ,
ಹಲ್ಲುಗಳ ಮಿಲ್ಲಿನಲಿ,
ನುಣ್ಣಗೆ ಅರೆದು,
ಹಿಂಡಿದ ರಸ ಹೀರಿ,
ನುಂಗಿ ನೀರು ಕುಡಿಯುತ್ತಾರೆ - 
ಈ ರೊಟ್ಟಿ ಆಕ್ರಂದನ ಮಾಡದ ಹಾಗೆ,
ಮತ್ತೆ ಉಸಿರೆತ್ತದ ಹಾಗೆ.



ಟಿಪ್ಪಣಿ:
ಈ ಬ್ಲಾಗಿನಲ್ಲಿಯ ಮೊದಲನೆಯ ಕವನ "ಬೇಡ ಕೃಷ್ಣಾ ರಂಗಿನಾಟ" ಕುರಿತು ಒಂದು ಚಿಕ್ಕ ವಿವರಣೆ ನೀಡುವುದು ಸಮಂಜಸವೆಂದು ಅನಿಸಿದೆ. ಇಲ್ಲಿ, ೭೮೬- ಒಂದು ಸಮುದಾಯವನ್ನು ಪ್ರತಿನಿಧಿಸಿದರೆ (ಮುಸ್ಲಿಂ ಸಮುದಾಯ), ರಾಧೆ ಇನ್ನೊಂದು ಸಮುದಾಯವನ್ನು ಪ್ರತಿನಿಧಿಸುತ್ತಾಳೆ. ಒಟ್ಟಾರೆಯಾಗಿ ಈ ಕವನ, ಸಮಾಜದ ಸಾಮರಸ್ಯ ಹದಗೆಡುತ್ತಿರುವುದನ್ನು ಬಿಂಬಿಸುತ್ತದೆಯೆಂದು ಅಂದುಕೊಂಡಿದ್ದೇನೆ. ವಿವರಣೆಯನ್ನು ತಡವಾಗಿ ನೀಡುತ್ತಿರುವುದಕ್ಕೆ ಕ್ಷಮೆ ಇರಲಿ.

Friday, January 8, 2010

ಇವರ ನಿಮ್ಮವರೆಂದು ಕಾಣಿರಿ

ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಸುನೀತಾ ಕೃಷ್ಣನ್ ಅನ್ನುವ ಸಾಮಾಜಿಕ ಕಾರ್ಯಕರ್ತೆ ನೀಡಿದ ಭಾಷಣದ ವಿಡಿಯೋ ಕಣ್ಣಿಗೆ ಬಿತ್ತು. ಈ ವಿಡಿಯೋ ವಿಚಾರ ಪ್ರಚೋದಕ ಮತ್ತು ಮನಕಲಕುವ ಹಾಗಿದ್ದುದರಿಂದ ಸಹ-ಬ್ಲಾಗಿಗರ ಗಮನಕ್ಕೆ ತರಬಹುದೆಂದೆನಿಸಿತು. ೧೩ ನಿಮಿಷಗಳನ್ನ ವಿಡಿಯೋ ವೀಕ್ಷಣೆಗೆ ಮೀಸಲಿಟ್ಟರೆ ಸಾಕು.  ಈ ವಿಡಿಯೋದ  URL ಲಿಂಕನ್ನು ಲೇಖನದ ಕೊನೆಯಲ್ಲಿ ಅಂಟಿಸಿದ್ದೇನೆ.

 ಈ ಸುನೀತಾ ಕೃಷ್ಣನ್, ಲೈಂಗಿಕ  ಹಿಂಸೆಗೆ ಒಳಗಾದವರ ರಕ್ಷಣೆಗೆ ಹಾಗು ಅಂಥವರ ಪುನರ್ವಸತಿಗೆ ಶ್ರಮಿಸುತ್ತಿದ್ದಾರೆ. ತಮ್ಮ ಮಾತುಗಳನ್ನು ಕೆಳಗಿನ ಉದಾಹರಣೆಗಳೊಂದಿಗೆ ಪ್ರಾರಂಭಿಸುತ್ತಾರೆ.
  1. ನಾಲ್ಕು ವರ್ಷದ ಪ್ರಣೀತಳ ತಾಯಿ ಲೈಂಗಿಕ ಕಾರ್ಯಕರ್ತೆ, HIV ಪೀಡಿತೆ. ತನಗೆ ತುಂಬಾ ಅನಾರೋಗ್ಯವಾದಾಗ ಪ್ರಣೀತಳನ್ನು ಒಬ್ಬ ಬ್ರೋಕರ್'ಗೆ ಮಾರುತ್ತಾಳೆ. ಸುನೀತಾ ಕೃಷ್ಣನ್ ತಂಡಕ್ಕೆ ಈ ವಿಷಯ ಗೊತ್ತಾಗಿ, ಅಲ್ಲಿಗೆ ತಲುಪುವದರೊಳಗೆ ಈ ಮಗುವಿನ ಮೇಲೆ ಅದಾಗಲೇ ಮೂರು ಜನರ ಗುಂಪಿನಿಂದ ಅತ್ಯಾಚಾರ ನಡೆದುಹೋಗಿರುತ್ತದೆ.
  2. ಮೂರು ವರ್ಷದ ಶಾಹೀನ್ ರೈಲು ಹಳಿಗಳ ಬದಿಯಲ್ಲಿ ಸಿಕ್ಕಾಗ ಸಾಯುವ ಸ್ಥಿತಿಯಲ್ಲಿರುತ್ತಾಳೆ. ಈ ಮಗು ಕೂಡ ಅತ್ಯಾಚಾರಕ್ಕೊಳಗಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಗುವಿನ ಸಣ್ಣ ಕರಳು ಹೊರಗೆ ಬಂದಿರುತ್ತದೆ, ಸಣ್ಣ ಕರುಳನ್ನು ಸ್ವಸ್ಥಾನಕ್ಕೆ ಸೇರಿಸಲು  32 ಹೊಲಿಗೆಗಳು ಬೀಳುತ್ತವೆ - ಮಗು ಸದ್ಯಕ್ಕೆ ಉಳಿದುಕೊಳ್ಳುತ್ತದೆ.
  3. ಐದು ವರ್ಷದ ಅಂಜಲಿಯ ತಂದೆ ಕುಡುಕ. ಮಗಳನ್ನು ಸೂಳೆಗಾರಿಕೆಗೆ ಮಾರಿಬಿಡುತ್ತಾನೆ. ಈ ಮಗುವನ್ನೂ ಸುನೀತಾ ಕೃಷ್ಣನ್ ತಂಡ ರಕ್ಷಿಸುತ್ತದೆ. 
ಸ್ವಯಂ ಸುನೀತಾ ಕೃಷ್ಣನ್, 15 ವರ್ಷದವರಾಗಿದ್ದಾಗ ಎಂಟು ಜನರ ಗುಂಪಿನಿಂದ ಲೈಂಗಿಕ ಹಿಂಸೆಗೊಳಗಾಗಿರುತ್ತಾರೆ. ಸಮಾಜದ ಅನಾದರವೇ,  ಆ ಸಂದರ್ಭದ ದೈಹಿಕ ಹಿಂಸೆಗಿಂತ ಹೆಚ್ಚಿನ ನೋವನ್ನು ನೀಡಿತು ಅವರಿಗೆ.

ಲೈಂಗಿಕ ಹಿಂಸೆಗೊಳಗಾದವರ ಪುನರ್ವಸತಿಗೆ  ನಡೆಸುತ್ತ ಬಂದ  ಈ ಹೋರಾಟದಲ್ಲಿ ೧೪ ಸಲ ಮಧ್ಯವರ್ತಿಗಳಿಂದ ಹಲ್ಲೆಗೊಳಗಾಗಿದ್ದಾರೆ.   ಇದರ ಪರಿಣಾಮವಾಗಿ ಎಡಗಿವಿಯ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ.  ನೋವುಂಡವರನ್ನು  ಮುಖ್ಯವಾಹಿನಿಗೆ ತರುವ ಹೋರಾಟ ಈಗಲೂ ಮುಂದುವರೆದಿದೆ. ಇವರನ್ನು ತಮ್ಮವರೆಂದು ಸ್ವೀಕರಿಸಲು ಸಮಾಜವೇ ದೊಡ್ಡ ತಡೆಗೋಲಾಗಿದೆ, ಸವಾಲಾಗಿದೆ  ಎನ್ನುತ್ತಾರೆ. ಶೋಷಿತರ ಬಗ್ಗೆ ಮಾರುದ್ದ ಭಾಷಣ ಕೇಳಲು, ಸಿನೆಮಾ ನೋಡಲು ತುಂಬಾ ಚೆನ್ನಾಗಿರುತ್ತದೆ, ಆದರೆ ಶೋಷಿತರನ್ನು ಮನೆಗೆ ಕರೆಯುವದು,  ಅವರಿಗೆ ಉದ್ಯೋಗ ನೀಡುವದು, ಅವರ ಮಕ್ಕಳ ಜೊತೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾತ್ರ ಚೆನ್ನಾಗಿರುವುದಿಲ್ಲ, - ನಮ್ಮ ವಿಶಾಲ ಮನೋಭಾವ ಅಲ್ಲಿಗೇ ಮುಕ್ತಾಯಗೊಳ್ಳುತ್ತದೆ, ಎಂದು ನೋವು ತುಂಬಿ ಹೇಳುತ್ತಾರೆ. ನೋವುಂಡವರನ್ನು ಮನುಷ್ಯರಂತೆ ನೋಡಿಕೊಳ್ಳಿ, ಇನ್ನಾದರೂ ಮೌನದ ಸಂಸ್ಕೃತಿ ಮುರಿದು ಈ ಕಥೆಯನ್ನು ಕನಿಷ್ಠ ಇಬ್ಬರಿಗೆ ಹೇಳಿ ಅವರ ಮನ ಪರಿವರ್ತನೆ ಮಾಡಿ, ಮತ್ತೆ ಅವರು ಇನ್ನಿಬ್ಬರಿಗೆ ಈ ಕಥೆ ಹೇಳುವಂತೆ ಮಾಡಿ, ನಿಮ್ಮ ಸೀಮಿತ ಜಗತ್ತಿನಲ್ಲಾದರೂ ಸರಿ, ಸಮಾಜ ಪರಿವರ್ತನೆ ಮಾಡಲು ಸಹಕರಿಸಿ ಎಂದು ಬಿನ್ನವಿಸುತ್ತ ಮಾತು ಮುಗಿಸುತ್ತಾರೆ.

ಕೃಪೆ:
 http://www.ted.com/
TED - Ideas worth spreading. Technology, Entertainment, Design - That is what TED stands for.



Saturday, January 2, 2010

ಇದು ಸಮಯ