Tuesday, February 16, 2010
ಸ್ನೇಹ
ತೆರೆ ತೆರೆಯಾಗಿ ಹರಿವ
ತೊರೆಯ ನೀರು
ತೊರೆದು ಹೋದದ್ದು ಯಾವಾಗ
ಎನ್ನುವದೇ ಅರಿವಾಗುವುದಿಲ್ಲ.
ಇತಿಹಾಸ ಸೇರಿದ ನದಿ
ಸರಸ್ವತಿಯಂತೆ ಹರಿದು ಹೋಗಿರಬಹುದೇ,
ಆಚೀಚೆ ದಡಗಳ ಮರೆತು
ಹರಡಿದ ಮರಳಿನ ನಡುವೆ?
ಗುಪ್ತ ಗಾಮಿನಿಯ ನೆಲೆಯೆಲ್ಲ
ಹರಿವ ಕನಸಿಗೆ ಕೊನರಿ
ಕೊನೆಗಾದರೂ ಒಸರಲಿ
ಮರಳೊಡಲಿಂದ ಹನಿ ನೀರು.
Friday, February 12, 2010
ಕಾಗದದ ಚೀಲದ ಸ್ವಗತ
ನಾನೊಂದು ಕಂದು ಬಣ್ಣದ ಕಾಗದದ ಚೀಲ. ಬಹುಶಃ ನಿಮ್ಮ ಮನೆಯ ಕೈತೊಳೆಯುವ ಕಟ್ಟೆಯ ಕೆಳಗೆ ರಾಶಿ ಬಿದ್ದಿರುವ ನನ್ನ ಗೆಳೆಯರ ಜೊತೆಗೇ ನನ್ನ ಕೊನೆಯಾಗಬಹುದು. ಅಥವಾ ನನ್ನನ್ನು ಕತ್ತರಿಸಿ ಒಂದು ಹಳೆಯ ಪುಸ್ತಕದ ರಕ್ಷಣೆಯ ಬೈಂಡ್ ಆಗಿ ನೀವು ಬಳಸಬಹುದು. ಅಥವಾ ನಾನು ನಿಮ್ಮ ಮನೆಯ ಹರಗಣದಲ್ಲಿ ಒಂದಾಗಿ ಸೇರಿ ಹೋಗಬಹುದು.
ನನಗೆ ಗಾಳಿಪಟವಾಗಿ ಹಾರಬೇಕೆಂಬ ದೂರದ ಆಸೆ ಇದೆ. ಯಾರಾದರೂ ನನಗೆ ಒಂದು ಗಾಳಿಪಟದ ರೂಪಕೊಟ್ಟು ಜೀವ ತುಂಬಿದರೆ ತುಂಬಾ ಸಂತೋಷವಾಗುತ್ತದೆ. ಏನೇ ಆಗಲಿ, ಬಂದದ್ದು ಬರಲಿ, ಅನುಭವಿಸುತ್ತೇನೆ. ಆದರೆ ನೀವು ನನ್ನಲ್ಲಿ ಕಿರಾಣಿ ಸಾಮಾನುಗಳನ್ನು ತುಂಬಿ ಪ್ರೀತಿಯಿಂದ ಎತ್ತಿಕೊಂಡು ಹೋದ ದಿನವನ್ನೆಂದೂ ನಾನು ಮರೆಯುವದಿಲ್ಲ.
ಇಂತು,
ಕಾಗದದ ಚೀಲ.
ಮೂಲ: ಚಿತ್ರದಲ್ಲಿರುವ ಕಾಗದದ ಚೀಲದ ಎದೆಯ ಮೇಲಿನ ಬರಹ. ಅನುವಾದವಷ್ಟೇ ನನ್ನದು.
Tuesday, February 2, 2010
ವರ್ತಮಾನ
[ಕೋರಿಯನ್ ಯುದ್ಧ (೧೯೫೦-೫೩)ದಲ್ಲಿ ಮಡಿದ ಯೋಧರ ನೆನಪಿಗೆ ವಾಶಿಂಗ್ಟನ್ ಡಿ.ಸಿ.ಯಲ್ಲಿ ಕಟ್ಟಿದ ಸ್ಮಾರಕದಲ್ಲಿರುವ ಪ್ರತಿಮೆಗಳು]
ನಮ್ಮ ತಾಯ್ನಾಡ ಗಡಿಯಲ್ಲೀಗ
ಭಾರೀ ಹೋರಾಟವಂತೆ
ಇಂಚು ಇಂಚಿನ ಭೂಮಿಗೂ
ಬಿಟ್ಟುಕೊಡದ ಕಾದಾಟವಂತೆ.
ದಿನಂಪ್ರತಿ ಮದ್ದು ಗುಂಡುಗಳ
ಎಡೆಬಿಡದ ಹಾರಾಟವಂತೆ
ನಮ್ಮದೆಷ್ಟೋ ವಿಮಾನಗಳು
ಶತ್ರುಗಳ ಗುಂಡಿಗಾಹುತಿಯಾದವಂತೆ.
ಕಾಳಗದಲಿ ಹೋರಾಡಿ ನಮ್ಮವರು
ವೀರ ಸ್ವರ್ಗ ಸೇರಿದರಂತೆ.
ದೇಶಕಾಗಿ ಜೀವ ತೆತ್ತವರಿಗೆ
ರಾಷ್ಟ್ರ ಗೌರವದ ಮರ್ಯಾದೆಯಂತೆ.
ಹುತಾತ್ಮರ ಬಂಧು ಬಳಗ
ತಮಗೆ ತಾವೇ ಸಂತೈಸಿಕೊಂಡರಂತೆ.
ಜನ್ಮ ಜನ್ಮಾಂತರಕೂ ಈ ದೇಹ
ದೇಶಕೇ ಮುಡಿಪು ಎಂದರಂತೆ.
ಗಡಿನಾಡ ಜನರೆಲ್ಲ ಜೀವ ಭಯದಿ
ವಲಸೆ ಬಂದಿಹರಂತೆ.
ನೆಲೆಯಿಲ್ಲದೇ ಕೂಳಿಲ್ಲದೆಯೇ
ತಬ್ಬಲಿಗಳ ಅರ್ತನಾದವಂತೆ.
ನೊಂದವರ ನೆರವಿಗೆಂದು ನಾಡ ಜನರೆಲ್ಲ
ಧನ ಕನಕ ಕೂಡಿಸುತಿಹರಂತೆ,
ರಕ್ತದಾನ ಮಾಡುತಿಹರಂತೆ,
ಮೆರವಣಿಗೆ ತೆಗೆಯುತಿಹರಂತೆ.
ಇದುವರಿಗಿನದೆಲ್ಲ ಬರೀ ಪೇಪರಿನ ಸುದ್ದಿ,
ಮತ್ತೆ ದೃಶ್ಯ ಮಾಧ್ಯಮದ ಸುದ್ದಿ.
ದೂರದಲಿ ತಂಪಾಗಿರುವ ಇವನಿಗೆ
ಇದಾವುದರ ಬಿಸಿಯೇ ಇಲ್ಲ.
ಸದ್ಯಕ್ಕೆ ದೇಶಕಾಗಿ ತಾನು
ಮಾಡಬೇಕಾದುದೇನೂ ಇಲ್ಲವೆಂದು
ಜೋರಾಗಿ ಆಕಳಿಸಿ, ಟಿವಿ ಆರಿಸಿ,
ಮುಸುಕೆಳೆದು ಬೆಚ್ಚಗೆ ಮಲಗಿಕೊಂಡ.
Subscribe to:
Posts (Atom)


