ಹುಣ್ಣಿಮೆಯ ಚಂದ್ರಮನೆ,
ಬಾನಿನಂಗಳದಿ ನಗುವವನೆ,
ದಿನಕೊಂದು ರೂಪ ತೋರುವವನೆ,
ನಂಬಲಹುದೇ ನಿನ್ನ ವರ್ತನೆ?
ಬಹಳ ಕಾಲದವರೆಗೆ
ನಮಗೆಲ್ಲ ಅರಿವೇ ಇರಲಿಲ್ಲ -
ನೀನು ಬೀರುವುದು ನಿನ್ನ ಬೆಳಕಲ್ಲ,
ನಿನ್ನದೆನ್ನುವ ಬೆಳಕೇ ನಿನಗಿಲ್ಲ,
ನಿಜ ಅಂದುಕೊಂಡಿರುವುದೆಲ್ಲ,
ನಿಜವೇ ಆಗಿರುವುದಿಲ್ಲ, ಎಂದೆಲ್ಲ.
ಹುಣ್ಣಿಮೆಯ ಬೆಳಕಲ್ಲಿ
ನಾಳಿನ ಸವಿಗನಸುಗಳ
ಹೂಗಳ ತುಂಬಿ ಮಡಿಲ ತುಂಬ,
ಒಂದೊಂದನೇ ಎತ್ತಿ ಪೋಣಿಸುವರಲ್ಲ;
ಮಿಂಚುವ ಕಂಗಳ ಬುಟ್ಟಿಯಲಿ
ತುಂಬಿಟ್ಟು ಸಂಭ್ರಮಿಸುವರಲ್ಲ;
ಮರುದಿನ ದಿನಕರನ ಬೇಗೆಯಲಿ
ಇವರ ಕಣ್ಣೊಳಗಿನ ಹೂಬುಟ್ಟಿ
ಕರಗಿ ನೀರ ಕೊಳವಾಗಿ,
ಕಣ್ಣೀರ ಹನಿಗಳು ಹರಿಯುತ್ತವೆಯಲ್ಲ -
ನಿನ್ನೆಯ ಕನಸುಗಳಾತ್ಮಕ್ಕೆ
ತರ್ಪಣ ನೀಡುತ್ತವೆಯಲ್ಲ;
ಹುಣ್ಣಿಮೆಯ ಬೆಳಕಲ್ಲಿ
ಭೋರ್ಗರೆವ ಕಡಲು
ಬೆಳದಿಂಗಳ ಬಸುರ ಹೊತ್ತು
ಮುಗಿಲಿಗೆ ಮುತ್ತಿಡುವಾಗ
ಒಡಲು ಸಂಕಟದಿ ಒಡೆದು
ಅಲೆಗಳು ಆಕ್ರೋಶದಲಿ
ದಂಡೆಗಪ್ಪಳಿಸಿ ಮಣ್ಣ ಬಗೆದು
ಭ್ರೂಣಗಳ ಹೂಳುತ್ತವೆಯಲ್ಲ;
ಮಿನುಗುವ ತಾರೆಗಳು
ಮರುಗುತ್ತ ಮಂಕಾಗುತ್ತವೆಯಲ್ಲ;
ಮಲಗಿದ ದಿನ ನೋವಿನಲಿ
ನರಳುತ್ತ ಹೊರಳುತ್ತದೆಯಲ್ಲ;
ಹುಣ್ಣಿಮೆಯ ಚಂದ್ರಮನೆ
ನಿನ್ನ ಬೆಳಕೆಲ್ಲ ಮುಖವಾಡದ ನಗುವಂತಿದೆಯಲ್ಲ;
ಕದ್ದ ಕವನವನು ತನ್ನದೆಂದೇ ಓದಿ ಬೀಗಿದಂತಿದೆಯಲ್ಲ;
ಬಾನಲ್ಲಿ ನೀನೆಷ್ಟೇ ಬೆಳಗಿದರೂ,
ಇರುಳು ಹಗಲಾಗುವದಿಲ್ಲ;
ಅದಕೇ,
ಹುಣ್ಣಿಮೆಯ ಚಂದ್ರಮನೇ,
ನೀನೊಂದು ಬರೀ ಭ್ರಮೆ.
(ಹತ್ತು ವರ್ಷಗಳ ಹಿಂದೆ ಬರೆದ ಕವನ)
21 comments:
ಹತ್ತು ವರುಷಗಳ ಹಿ೦ದೆ ಬರೆದುದು ಇ೦ದಿಗೂ ಪ್ರಸ್ತುತವಾಗಿದೆ.
ಕವನ ಚೆನ್ನಾಗಿದೆ..
ಭ್ರಮೆ ಮತ್ತು ವಾಸ್ತವಗಳ ಅಂತರವನ್ನು ಅರಿತಾಗ ಆಗುವ disillusionಅನ್ನು ಸಮರ್ಪಕವಾಗಿ ಕವನಿಸಿದ್ದೀರಿ. ಉತ್ತಮ ಕವನ.
ಭಟ್ಟರೆ;ಬಹಳ ದಿನಗಳ ನಂತರ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ.ಸುಂದರ ಕವನ.ಅಭಿನಂದನೆಗಳು.
Wow.. Good one..
ಸುಂದರ ಕವನ..
ಕವನ ಈಗಲೂ ತನ್ನತನ ಉಳಿಸಿಕೊಳ್ಳುತ್ತದೆ, ಆಶ್ಚರ್ಯವೆಂದರೆ ಇಷ್ಟುದಿನವೂ ನೀು ಪ್ರಕಟಿಸದೇ ಇರುವುದು! ಆಯುರ್ವೇದದ ಔಷಧದ ಹಾಗೇ ಹಳತಾದಷ್ಟೂ ಒಳ್ಳೆಯದು ಎಂದು ಎತ್ತಿಟ್ಟಿದ್ದಿರೇ ? ಕವನ ಚೆನ್ನಾಗಿದೆ!
ಕವನವು ಹೆಚ್ಚು ಪ್ರಸ್ತುತವಾಗಿದೆ.
ಅನ೦ತ್
ಶ್ರೀ ಪರಾಂಜಪೆ ಅವರೆ,
ನಿಮ್ಮ ಆತ್ಮೀಯ ಒಕ್ಕಣೆಗೆ ಕೃತಜ್ಞತೆಗಳು.
ಮನಮುಕ್ತಾ ಅವರೆ,
ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ, ಕೃತಜ್ಞತೆಗಳು.
ಸುನಾಥ್ ಅವರೆ,
ಕೆಲವೊಮ್ಮೆ ಭ್ರಮೆ ಎಂದು ತಿಳಿದದ್ದು ಮತ್ತು ವಾಸ್ತವ ಅಂತ ಅಂದುಕೊಂಡಿದ್ದು, ಈ ಎರಡೂ, ಅದಲು ಬದಲು ಆಗಿಬಿಡುತ್ತವೆ ಎಂದು ಆಗಾಗ್ಗೆ ನನಗೆ ಅನ್ನಿಸುತ್ತಿರುತ್ತದೆ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಕೃತಜ್ಞತೆಗಳು.
ಆತ್ಮೀಯ ಮಿತ್ರ ಡಾ.ಕೃಷ್ಣಮೂರ್ತಿ ಅವರೆ,
ನಿಮ್ಮ ಒತ್ತಾಸೆಗಾಗಿಯಾದರೂ ಬ್ಲಾಗಿನಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳಬೇಕೆಂದು ಬಯಸಿದರೂ ಸಾಧ್ಯವಾಗುತ್ತಿಲ್ಲ. ಕವನ ಮೆಚ್ಚಿದ್ದಕ್ಕೆ ಕೃತಜ್ಞತೆಗಳು.
ರವಿಕಾಂತ್ ಗೋರೆ ಅವರೆ,
ಮೆಚ್ಚಿ ಪ್ರತಿಕಿಯಿಸಿದ್ದಕ್ಕೆ ಕೃತಜ್ಞತೆಗಳು.
ಚುಕ್ಕಿ ಚಿತ್ತಾರ ಅವರೆ,
ಮೆಚ್ಚಿ ಪ್ರತಿಕಿಯಿಸಿದ್ದಕ್ಕೆ ಕೃತಜ್ಞತೆಗಳು.
ವಿ. ಆರ್. ಭಟ್ಟರೇ,
"ಉಪ್ಪಿನಕಾಯಿ ಹಾಕಿ ಇಟ್ಟದ್ದು" ಎಂಬ ಉಪಮೆ ಮಾತ್ರ ಗೊತ್ತಿತ್ತು. "ಆಯುರ್ವೇದದ ಔಷಧದ ಹಾಗೇ ಹಳತಾದಷ್ಟೂ ಒಳ್ಳೆಯದು ಎಂದು ಎತ್ತಿಟ್ಟಿದ್ದು" ಎಂಬ ಹೋಲಿಕೆಯ ಹೊಸಬಗೆ ಚೆನ್ನಾಗಿದೆ. ಕವನ ಮೆಚ್ಚಿದ್ದಕ್ಕೆ ಕೃತಜ್ಞತೆಗಳು.
ಅನಂತರಾಜ್ ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಮಾವ,
ವಿಭಿನ್ನ ದೃಷ್ಟಿ! ಒಳ್ಳೆ ಕವನ!
ಇಪ್ಪತ್ತೇಳು ನಕ್ಷತ್ರಗಳಿಗೆ ಗಂಡ ಹುಣ್ಣಿಮೆಯ ಚಂದ್ರ!
ತಾರೆ - ರೋಹಿಣಿಯರ ಪ್ರಿಯಕರ!
ಅತ್ರಿ ಸೂನು ಬುಧಪಿತ ಬೃಹಸ್ಪತಿಯ ಅಳಿಯ !
ವೃಧ್ಧಿ - ಕ್ಷಯ ಸಮಾಯುಕ್ತ
ಚಂದ್ರ ದೆಸೆ ಅಶುಭ!
ಭೂಮಿಯ ನೆರಳು ಬಿದ್ದರೆ ಪಿತೃಗಳಿಗೆ ಪಿಂಡ!
ಚಂದ್ರನಿಲ್ಲದೆ ಔಷಧಿ ನಿಸ್ಸಾರ!
ಒಟ್ಟಾರೆ ಚಂದ್ರ ಇದ್ದರೂ ಗ್ರಹಚಾರ... ಇಲ್ಲದಿದ್ದರೂ ಗ್ರಹಚಾರ!
ಶಿವಣ್ಣ,
ನಿನ್ನ ಪ್ರತಿಕ್ರಿಯೆ ತುಂಬಾ ಹಿಡಿಸಿತು.
ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ಆಕಸ್ಮಿಕಗಳ ಬಗೆಗೆ( ತಿಳಿದೋ, ತಿಳಿಯದೆಯೋ) ತುಂಬಾ ಮಾರ್ಮಿಕವಾಗಿ ಕವನದ ಮೂಲಕ ತೆರೆದಿಟ್ಟಿದ್ದು ಬಹಳ ಚೆನ್ನಾಗಿ ಮೂಡಿಬಂದಿದೆ ಸರ್.
Sir
sundara kavite
shabda jodane tumbane sogasaagide
abhinandanegalu
`ಹುಣ್ಣಿಮೆ ಚ೦ದ್ರಮ'ನ ಕವನ ಚೆನ್ನಾಗಿದೆ. ನಮ್ಮೂರಿನಲ್ಲಿ ನಡೆದ ಒ೦ದು ಅಷ್ಟಾವಧಾನದಲ್ಲಿ ನನ್ನನ್ನು ಆಶುಕವಿಯಾಗಿ ಕರೆದಿದ್ದರು. ಆಗ ಬರೆದಿದ್ದ `ವೈಜ್ಞಾನಿಕ ಚ೦ದ್ರ' ಎನ್ನುವ ಕವನದ ನೆನಪಾಯ್ತು. ನಿಮಗೆ `ಮಕರ ಸಂಕ್ರಮಣದ ಶುಭಾಶಯಗಳು.' ನನ್ನ ಬ್ಲಾಗ್ ಗೊಮ್ಮೆ ಬನ್ನಿ
Post a Comment